ವಿಷ್ಣುಶರ್ಮರು ಮೂವರು ರಾಜಕುಮಾರರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿದರು. ಅವರನ್ನು ಕುರಿತು, “ಕಾಡಿನಲ್ಲಿ ಒಂದು ಸಿಂಹ ಮತ್ತು ಗೂಳಿಯು ಮಿತ್ರರಾಗಿದ್ದವು. ಅವುಗಳ ಸ್ನೇಹವನ್ನು ಧೂರ್ತ ನರಿಯೊಂದು ಮುರಿಯಿತು”, ಎಂದು ಹೇಳಿದರು.
“ಅದು ಹೇಗಾಯಿತು?”, ಎಂದು ಮೂವರು ಪುತ್ರರು ಕೇಳಿದಾಗ ವಿಷ್ಣುಶರ್ಮರು ಈ ಕಥೆಯನ್ನು ಹೇಳಿದರು.
ಮಹಿಲಾರೋಪ್ಯ ನಗರದಲ್ಲಿ ವರ್ಧಮಾನಕ ಎಂಬ ಒಬ್ಬ ಶ್ರೀಮಂತ ವ್ಯಾಪಾರಿ ಇದ್ದನು. ಒಂದು ದಿನ ಅವನಿಗೆ ಒಂದು ಗಾದೆಯು ನೆನಪಿಗೆ ಬಂತು.
ಇಲ್ಲದಿದ್ದಲ್ಲಿ, ಕಷ್ಟಪಟ್ಟು ಸಂಪಾದಿಸು!
ಸಂಪಾದಿಸಿದ್ದನ್ನು, ಸಂರಕ್ಷಿಸು!
ಸಂರಕ್ಷಿಸಿದ್ದನ್ನು, ವೃದ್ಧಿ ಪಡಿಸು!
ವೃದ್ಧಿಸಿದ್ದನ್ನು, ದಾನಮಾಡು!
ಶ್ರೀಮಂತ ವ್ಯಾಪಾರಿಯಾದ ವರ್ಧಮಾನಕನು ತನ್ನ ವ್ಯವಹಾರವನ್ನು ವೃದ್ಧಿಸಬೇಕೆಂದು ಇಚ್ಛಿಸಿದನು. ಆದ್ದರಿಂದ ವ್ಯಾಪರಕ್ಕಾಗಿ ಮಥುರಾ ನಗರಕ್ಕೆ ಹೊರಟನು. ಅವನ ಸರಕನ್ನು ಒಂದು ಗಾಡಿಯಲ್ಲಿ ಹಾಕಿದನು. ಗಾಡಿಯನ್ನು ಎಳೆಯಲು ನಂದಕ ಮತ್ತು ಸಂಜೀವಕ ಎಂಬ ಎರಡು ಗೂಳಿಗಳನ್ನು ಕಟ್ಟಿದನು. ವರ್ಧಮಾನಕನು ತನ್ನ ಸೇವಕರೊಡನೆ ಗಾಡಿಯಲ್ಲಿ ಕುಳಿತು ಮಥುರೆಗೆ ಹೊರಟನು.
ವರ್ಧಮಾನಕನು ದಟ್ಟವಾದ ಕಾಡಿನ ಮೂಲಕ ಹೋಗಬೇಕಾಗಿತ್ತು. ಕಾಡಿನ ಮಧ್ಯದಲ್ಲಿದ್ದಾಗ ಸಂಜೀವಕ ಎಂಬ ಗೂಳಿಯು ಅನಿರೀಕ್ಷಿತವಾಗಿ ಕೆಸರಿನಲ್ಲಿ ಕಾಲಿಟ್ಟಿತು. ಅದರ ಕಾಲು ಕೆಸರಿನಲ್ಲಿ ಸಿಲುಕಿಕೊಂಡು, ಅದಕ್ಕೆ ಗಾಯವಾಗಿ ಮುಂದೆ ಹೆಜ್ಜೆ ಇಡಲಾರದಂತೆ ಆಯಿತು.
ವರ್ಧಮಾನಕನು ಅದರ ಕಾಲನ್ನು ಸರಿಪಡಿಸುವಲ್ಲಿ ವಿಫಲನಾದನು. ಅವನು ಅಮೂಲ್ಯವಾದ ಸರಕನ್ನು ಸಾಗಿಸುತಿದ್ದನು. ಕಾಡು ಬಹಳ ಅಪಾಯಕರವಾಗಿತ್ತು. ವರ್ಧಮಾನಕನಿಗೆ ಆ ಗೂಳಿಯು ಎಷ್ಟೇ ಪ್ರಿಯವಾಗಿದ್ದರೂ ಅದರೊಡನೆ ಅಲ್ಲಿ ಇರಲು ಸಾಧ್ಯವಾಗಲಿಲ್ಲ. ವರ್ಧಮಾನಕನು ಸಂಜೀವಕನನ್ನು ಅಲ್ಲಿಯೇ ಬಿಡಬೇಕಾಯಿತು. ಅದನ್ನು ನೋಡಿಕೊಳ್ಳಲು ಕೆಲವು ಸೇವಕರಿಗೆ ಆದೇಶಿಸಿ ಪ್ರಯಾಣವನ್ನು ಮುಂದುವರಿಸಿದನು. ಆದರೆ ಅವರು ತಮ್ಮ ಸುರಕ್ಷತೆಗಾಗಿ ಆ ಗೂಳಿಯನ್ನು ಅಲ್ಲಿಯೇ ಬಿಟ್ಟು ಕೆಲವೇ ದಿನಗಳಲ್ಲಿ ತಮ್ಮ ಯಜಮಾನನನ್ನು ಸೇರಿಕೊಂಡರು. ಸೇವಕರು ಗೂಳಿಯು ಸತ್ತು ಹೋಯಿತೆಂದು ಸುಳ್ಳನ್ನು ಹೇಳಿದರು.
ಆದರೆ ಸಂಜೀವಕ ಸತ್ತಿರಲಿಲ್ಲ. ಕಾಲಕ್ರಮೇಣ ಅದರ ಕಾಲು ಗುಣವಾಗಿ ಕಾಡಿನಲ್ಲಿಯೇ ವಾಸಿಸಲಾರಂಭಿಸಿತು. ಹಸಿರಾದ ಹುಲ್ಲು ತಿನ್ನುತ್ತಾ, ಯಮುನೆಯ ನೀರನ್ನು ಸೇವಿಸುತ್ತಾ, ಆರೋಗ್ಯಕರವಾಯಿತು.
ಅದೇ ಕಾಡಿನಲ್ಲಿ ಪಿಂಗಲಕ ಎಂಬ ಸಿಂಹವು ಅಲ್ಲಿಯ ರಾಜನಾಗಿ, ನಿರ್ಭಯದಿಂದ ವಾಸಿಸುತ್ತಿತ್ತು. ಒಂದು ದಿನ ಸಂಜೀವಕನ ಘರ್ಜನೆಯನ್ನು ಕೇಳಿದ ಪಿಂಗಲಕನಿಗೆ ತಲ್ಲಣವಾಯಿತು. ಪಿಂಗಲಕನು ಯಾವಾಗಲೂ ಕಾಡಿನಲ್ಲಿಯೇ ವಾಸಿಸುತ್ತಿದ್ದರಿಂದ ಗೂಳಿಯ ಘರ್ಜನೆಯನ್ನು ಕೇಳಿರಲಿಲ್ಲ. ಅದು ಗಾಬರಿಗೊಂಡು ಕಾಡಿನೊಳಗೆ ಹೋಗಿ ಒಂದು ಅರಳೀಮರದ ಕೆಳಗೆ ತನ್ನ ಸಚಿವ ಸಮೂಹ ಮತ್ತು ಇತರ ಪ್ರಾಣಿಗಳೊಡನೆ ಆಳವಾಗಿ ಚಿಂತಿಸುತ್ತ ಕುಳಿತುಕೊಂಡಿತು.
ಅಲ್ಲಿ ವಿವೇಕಯುತವಾದ ಕರಟಕ ಮತ್ತು ಧೈರ್ಯಶಾಲಿಯಾದ ದಮನಕ ಎಂಬ ಎರಡು ನರಿಗಳು ಇವೆಲ್ಲವನ್ನೂ ನೋಡುತ್ತಿದ್ದವು. ಈ ಎರಡೂ ನರಿಗಳು ಸಿಂಹದ ಮಾಜಿ ಮಂತ್ರಿಗಳ ಮಕ್ಕಳಾಗಿದ್ದು, ಪ್ರಸ್ತುತ ನಿರುದ್ಯೋಗಿಗಳಾಗಿದ್ದವು.
ಸಿಂಹವು ಚಿಂತಾಕ್ರಾಂತನಾಗಿದ್ದನ್ನು ಕಂಡು, ದಮನಕ, “ಓ ಸ್ನೇಹಿತನೇ! ಯಾವುದೋ ವಿಷಯವು ನಮ್ಮ ರಾಜನನ್ನು ಕಾಡುತ್ತಿದೆ. ಅದೇನಿರಬಹುದು?”
ಇದಕ್ಕೆ ಕರಟಕ, “ಇದು ನಮಗೆ ಸಂಬಂಧಪಟ್ಟ ವಿಷಯವೇ? ಯಾರು ತಮಗೆ ಸಂಬಂಧಪಡದ ವಿಷಯದಲ್ಲಿ ಪ್ರವೇಶಿಸುತ್ತಾರೋ ಅವರು ಖಂಡಿತವಾಗಿಯೂ ಬಾಲ ಸಿಕ್ಕಿಸಿಕೊಂಡ ಕೋತಿಯ ಹಾಗೆ ವಿನಾಶವನ್ನು ಹೊಂದುತ್ತಾರೆ”, ಎಂದು ಉತ್ತರಿಸಿತು.
ದಮನಕನು ಕುತೂಹಲದಿಂದ, “ಕೋತಿಯು ಏನು ಮಾಡಿತು?” ಎಂದು ಕೇಳಿತು.
ಅದಕ್ಕೆ ಕರಟಕ ಕೋತಿಯು ಬಾಲವನ್ನು ಸಿಕ್ಕಿಸಿಕೊಂಡ ಕಥೆಯನ್ನು ಹೇಳಿತು.