Please send feedback or comments to contact@gurukula.com
ಸನಾತನ ಧರ್ಮವು ಭಗವಂತನ ಮೂರು ಮೂಲಭೂತ ಸ್ವರೂಪಗಳನ್ನು ಹೀಗೆ ವಿವರಿಸುತ್ತದೆ -
ಬ್ರಹ್ಮ ದೇವ - ಸೃಷ್ಟಿಕರ್ತ (ಸೃಷ್ಟಿಕಾರಕ),
ಭಗವಾನ್ ವಿಷ್ಣು - ಸಂರಕ್ಷಕ (ಸ್ಥಿತಿಕಾರಕ),
ಭಗವಾನ್ ಶಿವ - ಸಂಹಾರಕ (ಲಯಕಾರಕ)
ಶ್ರೀಮದ್ಭಾಗವತವು ಭಗವಾನ್ ವಿಷ್ಣುವನ್ನು ಕುರಿತು ಅಧಿಕೃತ ಮಾಹಿತಿ ಒದಗಿಸುವ ಮೂಲಗ್ರಂಥವಾಗಿದೆ.
ಶ್ರೀಮದ್ಭಾಗವತದ ಉಲ್ಲೇಖಗಳಲ್ಲಿ ಒಂದಾದ "ದಶಾವತಾರ"ವು ಭಗವಾನ್ ವಿಷ್ಣುವಿನ ಹತ್ತು ಅವತಾರಗಳನ್ನು ವಿವರಿಸುತ್ತದೆ. ದಶ ಎಂದರೆ ಹತ್ತು, ಅವತಾರವೆಂದರೆ ಸ್ವರೂಪವು.
ಇತಿಹಾಸದುದ್ದಕ್ಕೂ ಧರ್ಮದ ಪಾಲನೆ ಹಾಗು ಅಧರ್ಮದ ನಿರ್ಮೂಲನೆಗಾಗಿ ಭಗವಾನ್ ವಿಷ್ಣುವು ವಿವಿಧ ಸ್ವರೂಪಗಳಲ್ಲಿ ಅವತರಿಸಿರುವನು. ಈ ಅವತಾರಗಳ ಕುರಿತ ತಿಳುವಳಿಕೆಯು ಭಾರತೀಯ ಸಂಸ್ಕೃತಿಯ ಮೌಲ್ಯವನ್ನು ಅರಿಯಲು, ಅರ್ಥೈಸಿಕೊಳ್ಳಲು ಅಡಿಪಾಯವಾಗಿದೆ. ಇದರ ಕಲಿಕೆಯು ರೋಚಕ ಹಾಗು ಆನಂದಮಯವಾಗಿರುತ್ತದೆ.
ಮತ್ಸ್ಯಾವತಾರದ ಮೀನಿನ ಸ್ವರೂಪದಿಂದ ಹಿಡಿದು, ಶ್ರೀರಾಮಾವತಾರದ ಪುರುಷೋತ್ತಮ (ಪರಿಪೂರ್ಣ ವ್ಯಕ್ತಿ, ವ್ಯಕ್ತಿವದ) ಸ್ವರೂಪದವರೆಗೆ, ಭಗವಾನ್ ವಿಷ್ಣುವು, ಧರ್ಮ, ನೈತಿಕತೆ ಹಾಗು ಶಿಷ್ಟಾಚಾರದ ಕುರಿತ ಅಮೃತ ಜ್ಞಾನವನ್ನು ಪಸರಿಸುತ್ತಾನೆ. ಈ ಅವತಾರಗಳು ನಮಗೆ ಧರ್ಮವನ್ನು ಬೋಧಿಸುತ್ತವೆ. ಭಾರತದ ವೈಶಾಲ್ಯವನ್ನು ಅರಿಯಲು ಅಡಿಪಾಯ ಹಾಕುವ ಜ್ಞಾನವನ್ನು ನೀಡುತ್ತವೆ. ನಮ್ಮ ಜೀವನದಲ್ಲಿ ಭಕ್ತಿಯ ಭಾವನೆಯನ್ನು ಮೂಡಿಸುತ್ತವೆ.
ನನ್ನ ಅಧ್ಯಯನ ಹಾಗು ಅಧ್ಯಾಪನದ ಅನುಭವದಲ್ಲಿ, ಹಲವರು, ಹಿಂದೂ ಧರ್ಮದ ಬಗ್ಗೆ ಒಂದು ಸಂಕ್ಷಿಪ್ತ ಅಧ್ಯಯನ ಕ್ರಮವನ್ನು (ಕೋರ್ಸ್) ಕಲಿಯಬಯಸಿದ್ದಾರೆ. ನಮ್ಮ ಸಂಸ್ಕೃತಿಯ ಅಗಾಧತೆಯನ್ನು ಒಂದು ಲಘು ಸಾರಾಂಶ ರೂಪದಲ್ಲಿ ವಿವರಿಸುವುದು ಅಸಾಧ್ಯವಾದರೂ, ಸನಾತನ ಧರ್ಮವನ್ನು ಅರ್ಥ ಮಾಡಿಕೊಳ್ಳಲು ಶೀಘ್ರ ಉಪಾಯವು ದಶಾವತಾರದ ಮೂಲಕವೇ !
ದಶಾವತಾರಗಳ ಕಿರು ಪರಿಚಯ:
1. ಮತ್ಸ್ಯ
ಅವತಾರ -
ಸಪ್ತ
ಋಶಿಗಳು, ವೇದಗಳು,
ಬಗೆ ಬಗೆಯ ಮೂಲಿಕೆಗಳು
ಹಾಗು ಬೀಜಗಳನ್ನು
ರಕ್ಷಿಸಲು ಭಗವಾನ್
ವಿಷ್ಣುವು ಮತ್ಸ್ಯ
(ಬೃಹತ್ ಮೀನಿನ) ಅವತಾರ
ಧರಿಸಿದನು. ಅವುಗಳನ್ನು
ಸುರಕ್ಷಿತವಾಗಿ
ಮುಂದಿನ ಮನ್ವಂತರಕ್ಕೆ
ಕೊಂಡೊಯ್ಯಲು, ರಾಜ
ಸತ್ಯವ್ರತನಿಗೆ
ಭಗವಂತನು ಸಹಾಯ ಮಾಡಿ
ಅನುಗ್ರಹಿಸಿದನು.
2. ಕೂರ್ಮ
ಅವತಾರ -
ಅಮೃತವನ್ನು
ಪಡೆದು ಅಮರರಾಗಲು
ಬಯಸಿದ ದೇವ - ದಾನವರಿಗೆ
ಕ್ಷೀರ ಸಮುದ್ರವನ್ನು
ಕಡೆಯಲು ಸಹಾಯ ಮಾಡುವುದಕ್ಕಾಗಿ,
ಭಗವಾನ್ ವಿಷ್ಣುವು
ಬೃಹದಾಕಾರದ ಆಮೆಯ
ಅವತಾರ ಧರಿಸಿ, ಮಂದರ
ಗಿರಿಯನ್ನು ತನ್ನ
ಬೆನ್ನಿನ ಮೇಲೆ ಎತ್ತಿದನು.
3. ವರಾಹ
ಅವತಾರ -
ಹಿರಣ್ಯಾಕ್ಷನೆಂಬ
ಪಾತಾಳ ಲೋಕದ ಅಸುರನು,
ಭೂದೇವಿಯನ್ನು (ಭೂಮಿ
ತಾಯಿ) ತನ್ನ ಲೋಕಕ್ಕೆ
ಕೊಂಡೊಯ್ದನು. ರಸಾತಲವೆಂಬ
ಈ ಸ್ಥಳವು ಮಹಾಸಮುದ್ರದ
ಕೆಳಗಿತ್ತು. ಭಗವಾನ್
ವಿಷ್ಣುವು ಬೃಹದಾಕಾರದ
ವರಾಹ (ಹಂದಿಯ) ಅವತಾರ
ಧರಿಸಿ, ಭೂದೇವಿಯನ್ನು
ರಕ್ಷಿಸಿ ಮೇಲೆ ತಂದನು.
4. ನರಸಿಂಹ
ಅವತಾರ -
ಪ್ರಹ್ಲಾದ
- ಐದು ವರ್ಷಗಳ ಬಾಲಕ,
ಭಗವಾನ್ ವಿಷ್ಣುವಿನಲ್ಲಿ
ದೃಢವಾದ ಭಕ್ತಿಯನ್ನು
ಹೊಂದಿದ್ದನು. ಅವನನ್ನು
ರಕ್ಷಿಸಿ ಪೊರೆಯಲು
ಭಗವಂತನು, ಅರ್ಧ
ನರ ರೂಪ (ಅಂದರೆ ಮನುಷ್ಯ
ರೂಪ) ಇನ್ನರ್ಧ ಸಿಂಹದ
ರೂಪದಲ್ಲಿ ಅವತರಿಸಿದನು.
5. ವಾಮನ
ಅವತಾರ -
ಮಹಾಬಲಿಯು
(ಪ್ರಹ್ಲಾದನ ಮೊಮ್ಮಗ)
ಮೂರು ಲೋಕಗಳನ್ನೂ
ಜಯಿಸಿದಾಗ, ಭಗವಾನ್
ವಿಷ್ಣುವು ವಾಮನ
(ಕುಳ್ಳು) ರೂಪದಲ್ಲಿ
ಅವತರಿಸಿ ಮೂರು ಲೋಕಗಳನ್ನು
ಮಹಾಬಲಿಯ ಅಟ್ಟಹಾಸದಿಂದ
ರಕ್ಷಿಸಿದನು.
6. ಪರಶುರಾಮ
ಅವತಾರ -
ತಮ್ಮ
ರಾಜಧರ್ಮವನ್ನು
ಮರೆತು ಸಜ್ಜನರಿಗೆ
ತೊಂದರೆಯನ್ನು ಉಂಟುಮಾಡುತ್ತಿದ್ದ
ರಾಜರನ್ನು ಶಿಕ್ಷಿಸಲು
ಭಗವಂತನು ಪರಶುರಾಮ
ಅವತಾರವನ್ನು ಧರಿಸಿದನು.
7. ಶ್ರೀ
ರಾಮ ಅವತಾರ -
ಜಗತ್ತಿಗೆ
ಅತ್ಯುತ್ತಮ ಆದರ್ಶದಾಯಕವಾದ
ದಿವ್ಯ ಅವತಾರ. ತಂದೆ-ತಾಯಿಯರ
ವಚನದಲ್ಲಿ ಇರಬೇಕಾದ
ವಿಧೇಯತೆಯ ಮಹತ್ವವನ್ನು
ಪ್ರದರ್ಶಿಸುತ್ತದೆ.
ಸುಖ - ದುಃಖಗಳನ್ನು
ಸಮಾನವಾಗಿ ಸ್ವೀಕರಿಸುವ
ಬಗೆಯನ್ನು ತೋರುತ್ತದೆ.
8. ಬಲರಾಮ
ಅವತಾರ -
ಶ್ರೀಕೃಷ್ಣನ
ಅಣ್ಣನಾಗಿ ಜನಿಸಿ,
ಅಧರ್ಮವನ್ನು ಬಗ್ಗು
ಬಡಿಯಲು ಹಾಗು ಸಜ್ಜನರನ್ನು
ರಕ್ಷಿಸಲು ಕೃಷ್ಣನಿಗೆ
ಸಹಾಯವಾದ ಅವತಾರ.
9. ಶ್ರೀ
ಕೃಷ್ಣ ಅವತಾರ -
ಭಗವಂತನು
ತನ್ನ ಲೀಲೆಗಳ ಮಳೆಯನ್ನೇ
ಸುರಿಸಿ ಜನರನ್ನು
ಮಂತ್ರಮುಗ್ಧರನ್ನಾಗಿಸಿದ
ಅತ್ಯಂತ ಮಧುರ ಅವತಾರವಿದು.
ನಾವು ಸದಾ ಅವನ ದಿವ್ಯ
ಸೌಂದರ್ಯದ ಉಪಾಸನೆ
ಹಾಗು ನಾಮಸ್ಮರಣೆ
ಮಾಡಲೆಂದೇ ತಾಳಿದ
ರೂಪವಿದು. ಅವನು
ಗೋಪ-ಗೋಪಿಯರೊಡನೆ
ಆಡದ ತುಂಟಾಟಗಳೇ
ಇಲ್ಲ!
10. ಕಲ್ಕಿ
ಅವತಾರ -
ಕಲಿಯುಗದ
ಅಂತ್ಯದಲ್ಲಿ, ಪ್ರಪಂಚವು
ಧರ್ಮವನ್ನು ಮರೆತು
ಪೂರ್ಣಪ್ರಮಾಣದ
ಅಧಾರ್ಮಿಕ ಜೀವನ
ನಡೆಸತೊಡಗಿದಾಗ
ಭಗವಂತನು ಕಲ್ಕಿ
ಅವತಾರ ತಾಳುವನು.
ದಶಾವತಾರದ ಕಥೆಗಳು ಸ್ಫೂರ್ತಿದಾಯಕ, ರೋಚಕ. ಅವು ನಮ್ಮಲ್ಲಿ ಧರ್ಮದ ಹಾಗು ಭಾರತದ ಬಗೆಗಿನ ತಿಳುವಳಿಕೆ ಮೂಡಿಸುತ್ತವೆ. ಎಂದಾದರೊಂದು ದಿನ ಭಗವಾನ್ ವಿಷ್ಣುವನ್ನು ಅರಿತು ಧನ್ಯರಾಗಲು ಇಚ್ಛಿಸುವ ಪ್ರತಿಯೊಬ್ಬರಿಗೂ ಈ ಕಥಾಸರಣಿಯನ್ನು ಅರ್ಪಿಸುವೆವು.
ಭಾಗವತದ ಕಿರು ಪರಿಚಯ
ಶ್ರೀಮದ್ಭಾಗವತವು ಹತ್ತು ಲಕ್ಷಣಗಳುಳ್ಳ ಮಹಾಪುರಾಣವಾಗಿದೆ
1. ಸರ್ಗ - ಪ್ರಾಥಮಿಕ ಹಂತದ ಸೃಷ್ಟಿ
2. ವಿಸರ್ಗ - ದ್ವಿತೀಯ ಹಂತದ ಸೃಷ್ಟಿ
3. ಸ್ಥಾನ - ಭಗವಂತನು ವಿಶ್ವವನ್ನು ಕ್ರಮವಾಗಿ ನಡೆಸುವ ಬಗೆ
4. ಪೋಷಣ - ಭಗವಂತನು ಸಕಲ ಜೀವರಾಶಿಗಳನ್ನು ಪೋಷಿಸುವ ಬಗೆ
5. ಊತಿ - ಕರ್ಮವಾಸನೆ, ಸುಪ್ತ ಪ್ರವೃತ್ತಿಗಳು
6. ಮನ್ವಂತರ - ಹದಿನಾಲ್ಕು ಮನುಗಳ ಕುರಿತ ಕಥೆಗಳು
7. ಈಶಾನುಕಥಾ - ಭಗವಂತನ ವಿವಿಧ ಅವತಾರಗಳ ಕಥೆಗಳು
8. ನಿರೋಧ - ಭಗವಂತನು ಯೋಗನಿದ್ರೆಯಲ್ಲಿರುವಾಗ (ಪ್ರಳಯಕಾಲದಲ್ಲಿ) ಸಕಲ ಜೀವರಾಶಿಗಳು ಆತನಲ್ಲಿ ಆಶ್ರಯ ಪಡೆಯುವವು.
9. ಮುಕ್ತಿ - ಅಹಂಕಾರ (ನಾನು ಎಂಬ ಭಾವ) ಹಾಗು ಮಮಕಾರ (ನನ್ನದು ಎಂಬ ಭಾವ), ಇವನ್ನು ತೊರೆದು ಭಗವಂತನ ಚರಣ ಕಮಲಗಳನ್ನು ಸೇರುವುದು.
10. ಆಶ್ರಯ - ಭಗವಂತನ ಚರಣ ಕಮಲಗಳನ್ನು ಆಶ್ರಯಿಸುವುದು.
ಶ್ರೀಮದ್ಭಾಗವತದಲ್ಲಿ ೧೨ (ಹನ್ನೆರಡು) ಸ್ಕಂಧಗಳು, ೩೩೫ (ಮುನ್ನೂರ ಮೂವತ್ತೈದು) ಅಧ್ಯಾಯಗಳು, ೧೮೦೦೦ (ಹದಿನೆಂಟು ಸಾವಿರ) ಶ್ಲೋಕಗಳಿವೆ. ೧೨ ಸ್ಕಂಧಗಳೂ ಭಗವಂತನ ಮಹಿಮೆಗಳು, ಭಗವನ್ನಾಮ ಸಂಕೀರ್ತನೆಯ ಮಹತ್ವ ಹಾಗು ಭಗವದ್ಭಕ್ತರ ಚರಿತ್ರೆಗಳಿಂದ ತುಂಬಿವೆ.